3ನೇ ದಿನದ ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ & ಮಹಾತ್ಮರಿಂದ ಪ್ರವಚನ
Date : 13-02-2026
ಮಧ್ಯರಾತ್ರಿ ಮಲಗಿದವರನ್ನು ಬಡಿದೆಬ್ಬಿಸಿದ ಸಿತಾರ ಫ್ಯೂಸನ್
ಮೋಹಕ ಕಥಕ್ ನೃತ್ಯಕ್ಕೆ ನೋಡುಗರು ದಿಲ್‌ಖುಷ್
ಹುಬ್ಬಳ್ಳಿ: ಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಗುರುವಾರ ರಾತ್ರಿ ಪಂಡಿತ ಮೋಹನರಾವ್ ಕಲ್ಯಾಣಪುರ ಕಥಕ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಮೋಹಕ ಕಥಕ್ ನೃತ್ಯವು ನೋಡುಗರಿಗೆ ಬಹಳ ಖುಷಿ ನೀಡಿತು. ಧೀರಜ್ ಗಜಬಿ ನಿರ್ದೇಶನದಲ್ಲಿ ಡಾ.ಅಪೂರ್ವ ಮತ್ತವರ ತಂಡದವರು ಪ್ರದರ್ಶಿಸಿದ ಲಯಬದ್ಧ ನೃತ್ಯವು ತನ್ನ ಹಾವ ಭಾವ ಬಳುಕುಗಳಿಂದ ಸಭಿಕರಲ್ಲಿ ಉತ್ಸಾಹ ತುಂಬಿತಲ್ಲದೇ ತಾಳಕ್ಕೆ ಚಪ್ಪಾಳೆ ತಟ್ಟುವಂತೆ ಮಾಡಿತು.
ಮುಂಬೈನ ಪಂಡಿತ ಸೂರ ಶರ್ಮಾ ತಮ್ಮ ಶುದ್ಧ ಸ್ವರದಲ್ಲಿ ರಾಗ ದರ್ಬಾರಿಯಲ್ಲಿ ಶಿವೋಹಂ ಶಿವೋಹಂ, ದುರ್ಗಾದಲ್ಲಿ ಮಾತಾ ಭವಾನಿ ಕೊನೆಗೆ ತರಾನಾ ಮೂಲಕ ಹಾಡುಗಾರಿಕೆಗೆ ಅಜ್ಜ ಪಂಡಿತ ಜಸರಾಜ್‌ರಂತೆ ಆಧ್ಯಾತ್ಮಕ ಟಚ್ ಕೊಟ್ಟರು. ಸರಗಮ್ ಮತ್ತು ತಿಹಾಯಿ ಅಲ್ಲದೇ ತಾನ್‌ಗಳು ಸೂರ್ ಹಾಡುಗಾರಿಕೆಯಲ್ಲಿ ವಿಶಿಷ್ಟವಾಗಿದ್ದವು.
ಇನ್ನೇನು ಮಧ್ಯರಾತ್ರಿ ಕಳೆದು ಭಕ್ತರು ನಿದ್ದೆ ಹೋಗುವ ಹಂತದಲ್ಲಿದ್ದಾಗ ಯುವ ಪ್ರತಿಭೆ ನಿಖಿಲ ಜೋಶಿ ಅವರ ಸಿತಾರ ಫ್ಯೂಸ್ ವಾದನ ಇಡೀ ಮಠದ ಆವರಣ ತುಂಬಿ ಮಲಗಿದವರನ್ನು ಎದ್ದು ಕುಳ್ಳಿರಿಸಿತು. ಸಿತಾರ್ ಹಾಡುತ್ತಿದೆಯೇನೋ ಎಂಬAತೆ ಅವರು ನುಡಿಸಿ ಮೆಚ್ಚುಗೆ ಗಳಿಸಿದರು.
ರೇಖಾ ಹೆಗಡೆ, ಸದಾಶಿವ ಐಹೊಳೆ, ಸುಜಾತಾ ಗುರವ, ಅನ್ನಪೂರ್ಣ ಭಾಂಡಗೆ, ಶೋಭಾ ಜಾಬಿನ, ಸುರಭಿ ಸುರೇಶ ಭಕ್ತಿಗೀತೆಗಳನ್ನು, ಅಗಡಿಯ ಲಕ್ಷö್ಮವ್ವ ಮಾಗಡಿ ಸಂಗಡಿಗರು ಜಾನಪದ ಗೀತೆ ಹಾಡಿದರು. ಆರೋಹಿ ಐಹೊಳೆ ಕಥಕ್ ನೃತ್ಯ ಪ್ರದರ್ಶಿಸಿದರು.
ಮನಸ್ಸಿನ ಪಾಪ ನಿವಾರಣೆಗೆ ಪಂಚಾಕ್ಷರಿ ಮಂತ್ರ ಮದ್ದು
ಹುಬ್ಬಳ್ಳಿ: ಶರೀರದಿಂದ ಮತ್ತು ವಾಣಿಯಿಂದ ನಡೆದ ಪಾಪಗಳು ಹೊರಗೆ ಕಾಣುತ್ತವೆ. ಆದರೆ ಮನಸ್ಸಿನಲ್ಲಿಯೆ ಮಾಡಿದ ಪಾಪಗಳು ಕಾಣದೇ ಮನುಷ್ಯನನ್ನು ಕರ್ಮದ ಜಂಜಡಕ್ಕೆ ಸಿಲುಕಿಸುತ್ತವೆ. ಸಿದ್ಧಾರೂಢರು ಉಪದೇಶಿಸಿದ ಓಂ ನಮ: ಶಿವಾಯ ಪಂಚಾಕ್ಷರಿ ಜಪದಿಂದ ಅದನ್ನು ನಿವಾರಣೆ ಮಾಡಬಹುದು ಎಂದು ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಸಿದ್ಧಾರೂಢ ಮಠದ ಕೈಲಾಸ ಮಂಟಪದಲ್ಲಿ ಮುಂಜಾನೆ ಆವಬಲವಿಡಿದಖಳ ದುರಿತವೆನಸಗಿ ಜೀವಿಸುವೆ ಎಂಬ ವಿಷಯ ಕುರಿತು ನಡೆದ ವೇದಾಂತ ಪ್ರವಚನದಲ್ಲಿ ಮಾತನಾಡಿದ ಅವರು ಮಾಡುವುದನ್ನೆಲ್ಲ ಮಾಡಿ ವೇದಾಂತ ಕೇಳಿದರೇನು ಪ್ರಯೋಜನ ಎಂದರು. ಮೂರೂ ಹಂತದ ಪಾಪ ಕಳೆಯಲು ಒಳಗಿನ ಕಣ್ಣು ತೆರೆಯಬೇಕು. ಆಗ ವಿವೇಕ ಉದಯಿಸುವುದು ಇದಕ್ಕೆ ಈಶ್ವರನ ಕೃಪೆ ಗಳಿಸಬೇಕು. ಆಗ ಗುರುಕೃಪೆಯೂ ಆಗಿ ಮಾರ್ಗದರ್ಶನ ಸಿಗುವುದು. ಅಂತಃಕರಣ ಕರಗುವುದು ಎಂದರು.
ಬದುಕಿನಲ್ಲಿ ನೀತಿಯುಕ್ತ ನಡವಳಿಕೆ ಅಗತ್ಯ. ಸತ್ಕಾರ್ಯಗಳನ್ನು ಮಾಡುತ್ತಲೇ ಇರಬೇಕು. ಆಗ ಪಾಪವು ಕಳೆದು ಭಗವಂತನ ಅನುಗ್ರಹ ಸಿಗುವುದು ಎಂದು ನಾಗೇಶ್ವರ ಸ್ವಾಮೀಜಿ ಹೇಳಿದರು. ಡಾ.ಶಿವಕುಮಾರ, ವಿದ್ಯಾನಂದ, ಬಸವರಾಜ, ಸಿದ್ಧ ಶಿವಯೋಗಿ, ಬಸವಾನಂದ, ಶಾಂತಾನAದ, ಕುಮಾರ, ಸಿದ್ಧಾನಂದ ಸ್ವಾಮೀಜಿಗಳು, ಲಲಿತಮ್ಮ, ಅಕ್ಕಮಹಾದೇವಿ ಮಾತೆಯರು ಉಪಸ್ಥಿತರಿದ್ದರು.